ಅವಳು ಹೆಜ್ಜೆಯಿತ್ತು ಮೇಲೆತ್ತಿದಲ್ಲಿ ಉಂಟಾಗುತ್ತಿದ್ದ ತಗ್ಗಿನಲ್ಲಿ ಬುರುಗು ನೀರು ಮತ್ತೆ ತುಂಬಿಕೊಳ್ಳುವುದನ್ನು ಗಮನಿಸುತ್ತಿದ್ದವನು ಇದ್ದಕ್ಕಿದ್ದಂತೆ " ಅರೆರೆ, ಇವಳ ಪಾದಗಳನ್ನು ಗಮನಿಸಿರಲೇ ಇಲ್ವಲ್ಲ !" ಎಂಬ ಉದ್ಗಾರದೊಂದಿಗೆ ಉಪ್ಪು ನೀರು ತೊಳೆದ ಬೆಳ್ಲನೆಯ ಪಾದಗಳನ್ನು ದಿಟ್ತಿಸುತ್ತಾ ಅವಳ ಮಗ್ಗುಲಲ್ಲೇ ಹೆಜ್ಜೆಗೆ ಹೆಜ್ಜೆ ಬೆರೆಸುತ್ತಿದ್ದ.
ಅವಳ ಮಾತುಗಳು ಮೋಡ ಕಡಿದು ಕುಂಭದ್ರೋಣದಂತೆ ಓತಾಪ್ರೋತವಾಗಿ, ವರ್ಷಾತರಗಳಿಂದ ತಡೆ ಹಿಡಿದಿದ್ದ ಒಡ್ದು ಒಡೆದಂತೆ ಧಾರಾಕಾರ ಸುರಿದು ಅವನ್ನನ್ನು ತೋಯಿಸಿ ತೆಪ್ಪಂಡಿ ಮಾಡಿ ಹಾಕಿತ್ತು. ಈಗ ಅವಕ್ಕೂ ರಭಸ ಕಡಿಮೆಯಾಗಿ ಒಂದು ಗತಿ, ಲಯ, ಓಘ ಪ್ರಾಪ್ತವಾಗಿತ್ತು. ಸಕ್ಕರೆಯ ಮರಳು, ತುಟಿಯಂಚಿಗೆ ನಗೆ ಮುಗುಳು... ಅಕ್ಕರೆಯ ಗೆಳತಿ ನಕ್ಕರದೆ ಭಾಗ್ಯ, ಎಂಬಂತೆ ಅವಳನ್ನೇ ದಿಟ್ತಿಸುತ್ತಾ, ಅವಳು ಮಾತಾಡಿ ಆಡಿ ಹಗುರಾಗುತ್ತಿದ್ದ ಪರಿಯನ್ನು ಬಿಟ್ಟಗಣ್ಣು ಬಿಟ್ಟಂತೆ ನೋಡ್ತಾ ನೋಡ್ತಾ ಜೊತೆಗೆ ನಡೆಯುತ್ತಿದ್ದವನಿಗೆ ಗಾಳಿಯಲ್ಲೇ ತೇಲುತ್ತಿರುವಂತೆ ಮೈಯೆಲ್ಲ ಹಿಂಜಿ ಹಾಕಿದ ಹತ್ತಿ.
ಅಷ್ಟು ಚಂದಗೆ ನಗುವ ಜೊತೆಗಾತಿ, ನಡೆಗೊಂದು ಮುದ; ಕಡಲ ಹವೆಯಲ್ಲೊಂದು ಮದ, ಆಬ್ಬಬ್ಬ, ಏನಿತ್ತು, ಏನಿಲ್ಲ ಆ ಕ್ಷಣಗಳಲ್ಲಿ, ಜಗತ್ತಿನ ಮಸ್ತಿಯನ್ನೆಲ್ಲ ಬಸಿದು ತಂದು, ಪರಮ ಸ್ವಾರ್ಥಿಗಳಂತೆ , ಜಿದ್ಡಿಗೆ ಬಿದ್ದ ಮಕ್ಕಳಂತೆ, ಐನ್‌ಸ್ಟೈನ್ ಥಿಯರಿಯಂತೆ, ಪರಸ್ಪರ ಹಂಚಿಕೊಳ್ಳಲು ಹೊರಟಂತೆ ಕಾಣಿಸುತ್ತಿದ್ದರು. ಇಬ್ಬರ ಬೆಸೆದ ಕೈಗಳಲ್ಲಿದ್ದ ಬಿಸುಪಿಗೆ ತಮ್ಮೂರು, ಹೇಳಿಬಂದ ಹಲವು ಸುಳ್ಳುಗಳು, ತಪ್ಪಿಸಿ ಬಂದಿದ್ದ ಕಣ್ಣುಗಳ ಜಾತ್ರೆ - ಇವೆಲ್ಲವನ್ನು ಮರೆಸುವ ಮಾಂತ್ರಿಕ ಶಕ್ತಿಯಿತ್ತು. ಕಡಲ ತಡಿಗೆ ಬಂದು ಕೂತು, ತಡಿಗೆ ಬಡಿವ ಅಲೆಗಳ ಮೋಹಕತೆಯ ಬಗ್ಗೆ ಅವಳೂ, ಅದರ ನಿರರ್ಥಕತೆಯ ಬಗ್ಗೆ ಅವನೂ ಚರ್ಚಿಸುತ್ತಾ ಕೂತಿದ್ದು, ಚರ್ಚೆಗೆ ಕಾವೇರುವ ಮುನ್ನವೇ ನಿಜವಾಗಿ ಕಾವೇರಿದ್ದ ಮರಳಿನಿಂದ ಮೇಲೆದ್ದು ನಡೆಯಲು ಶುರುವಿಟ್ಟಾಗ ಹೀಗೊಂದು "ದೂರ ತೀರ ಯಾನ" ಶುರುವಾಗಿತ್ತು.
No comments:
Post a Comment