Thursday, September 2, 2021

ಒಂಟಿ ಹೂವು..

 ಒಂಟಿ ಹೂವು..

ಕೆಳಗೆ ಬಿದ್ದರೂ ನಶಿಸಿಲ್ಲ,

ಯಾರದೋ ಕಾಲಡಿ ನಲುಗಿಲ್ಲ

ತನ್ನತನ ತೊರೆದಿಲ್ಲ

ಯಾರಾದರೂ ಎತ್ತಿಕೊಳ್ಳುವ ಆಸೆಯೂ ಇಲ್ಲ;

ತವಕವೂ ಇಲ್ಲ,

ಒಂಟಿ ಹೂ ಆದರೇನು

ದೇವರ ಮುಡಿಗೇರುವ ಅರ್ಹತೆ 

ಇನ್ನೂ ಕಳೆದುಕೊಂಡಿಲ್ಲ.. 

Sunday, August 8, 2021

ಮೀರಾ ಮತ್ತೆ ಹುಟ್ಟಿದ್ದು ರಾಧೆಯಾಗಿ.

 ಮೀರಾ ಮತ್ತೆ ಹುಟ್ಟಿದ್ದು ರಾಧೆಯಾಗಿ. 


ಭಕ್ತಿ, ಭಾವಗಳು ಈಗ ಹರಿದಿದ್ದು ಪ್ರೀತಿಯಾಗಿ. ಕೃಷ್ಣನ ಒಲವೆಲ್ಲ ಅವಳಿಗೇ ಸೀಮಿತ, ಅಪರಿಮಿತ ಹಾಗೂ ನಿಷ್ಕಲ್ಮಷ ಪ್ರೀತಿಯ ಧಾರೆ ಎಂದಿಗೂ ಕೃಷ್ಣನಿಗೆ. ಕೃಷ್ಣನ ಕೊಳಲೀಗ ಅವನ ಕಂಠದಲ್ಲೇ ಕರಗಿ ಹೋಗಿದೆ, ಅವನ ಮಧುರ ಮುರಳಿಯ ಗಾನ ಮತ್ತೀಗ ಅದೇ ರಾಧೆಗೆ. ರಾಧಾಳ ಹಣೆಯ ಸಿಂಧೂರ ಕೃಷ್ಣ. ಮದುವೆಯ ಪವಿತ್ರ ಬಂಧನ ಹಿಂದಿನ ಜನ್ಮದಲ್ಲೆಲ್ಲೋ ನಡೆದದ್ದಿದೆ, ಕೊನೆಯ ಜನ್ಮವಿರಬಹುದು, ಯಾವ ಬಂಧನದ, ಸಪ್ತಪದಿಗಳ, ಪ್ರಮಾಣಗಳ ಗೋಜಿಲ್ಲ. ಮತ್ತೆ ಅಗಲುವ ಆತಂಕವಿಲ್ಲ. ಜನ್ಮ ಜನ್ಮಕ್ಕೂ ಜೊತೆಯಾದವನು ಕೃಷ್ಣ. ಬೆರಳುಗಳ ಬೆಸೆದು ನಡೆಯುವ ದಾರಿ ಮುಂದೆಲ್ಲ ಹಸಿರಂತೆ. ಕೃಷ್ಣನ ಜೀವದ ಗೆಳತಿ ರಾಧೆಯಾದರೆ, ಅವಳ ಬಾಳಿನ ನಂದಾದೀಪ ಕೃಷ್ಣ. ಅವನ ಒಲವಿನ ಕರೆಗೆ ಸದಾ ಓಗೊಡುವ ರಾಧಾ, ಒಡಲಲ್ಲಿ ಹೊತ್ತು ತರುವುದು ತುಂಬು ಪ್ರೀತಿಯಷ್ಟೇ. ಅರಮನೆಯ ವೈಭೋಗ, ತಂಬೂರಿಯ ನಾದ, ಯಮುನಾ ನದಿಯ ತಟ, ಗೋವುಗಳ ಗಂಟೆಯ ಸದ್ದು, ಗೋಪಿಕೆಯರ ಕಾಲ್ಗೆಜ್ಜೆಯ ನಾದ ಇಂದಿಗೂ ಜೀವಂತ, ರಾಧಾ - ಕೃಷ್ಣರ ಮನಸಲ್ಲಿ. ❤️


Thursday, July 22, 2021

ಶಿಕ್ಷೆ

 22/7/21

ತಪ್ಪಲ್ಲದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ನಿದ್ದೆ ಇಲ್ಲದೆ ನರಳಿದ್ದ ಮನಸ್ಸು ಕೂಗಿ ಹೇಳುತ್ತಿತ್ತು ಮರು ಕ್ಷಣದಲ್ಲೇ ಕೈ ಸೇರಿತ್ತು ಹಳೆಯದಾಗಿ ಹಿಂದೆ ಸರಿದಿದ್ದ ಸೌಟು. ಗ್ಯಾಸ್ ಸ್ಟೌವ್ ಹಚ್ಚಿ ಉರಿಯುತ್ತಿದ್ದ ಬೆಂಕಿಯನ್ನೊಮ್ಮೆ ಶೂನ್ಯ ವಾಗಿ ದಿಟ್ಟಿಸುತ್ತಾ ನಿಂತಳು. ಕೈ ಯಾಂತ್ರಿಕವಾಗಿ ಸೌಟನ್ನು ಬೆಂಕಿಯ ಮುಂದ್ದೊಡ್ಡಿತು. ಕಾದು ಕೆಂಪಾದ ಸೌಟನ್ನು ಹಿಡಿದು ದೇವರ ಮುಂದೆ ಬಂದು ನಿಂತಳು. ಮನಸ್ಸು ಮೂಕವಾಗಿತ್ತು, ಕೇಳಲು ಹೇಳಲು ಏನೂ ಇರಲಿಲ್ಲ. ಬಲಗೈಲಿದ್ದ ಸೌಟು ಎಡಗೈಯ ಮೇಲೆ ಬರೆ ಎಳೆದೇ ಬಿಟ್ಟಿತು. ಚರ್ಮ ಸುಟ್ಟ ಆ ಕ್ಷಣದಲ್ಲಿ ಮನಸ್ಸು ಚೀರಿದ್ದು ಕೃಷ್ಣಾ ಎಂದಷ್ಟೇ. ನಿದ್ದೆಗೆಟ್ಟು ಬಳಲಿದ್ದ ಕಣ್ಣುಗಳಲ್ಲಿ ತಿಳಿ ನೀರಾಡಿದ್ದು ಗಮನಕ್ಕೆ ಬರಲಿಲ್ಲ. ಎಲ್ಲದಕ್ಕೂ ಮೀರಿ ತನ್ನ ಈ ನಿರ್ಧಾರಕ್ಕೆ ಕಾರಣವಾದ ವ್ಯಕ್ತಿಯ ಮಾತುಗಳು ಬಹಳ ಭಾರವೆನಿಸತೊಡಗಿತ್ತು. ಮೊದಲ ಬಾರಿಗೆ ತನ್ನನ್ನ ತಾನೇ ಶಿಕ್ಷಿಸಿಕೊಂಡಿದ್ದಳು, ಯಾರನ್ನೂ ನಿಂದಿಸದೆ. 

ಮೊಣಕೈ ಮೇಲಿನ ಮೃದುವಾದ ಜಾಗ ಈಗ ಕಪ್ಪಗೆ ಸುಟ್ಟು ಬೊಬ್ಬೆ ಏಳತೊಡಗಿತ್ತು. ಮನಸ್ಸು ಗಟ್ಟಿಯಾಗಿತ್ತು, ಮತ್ತೆ ತಪ್ಪು ಮಾಡಲಾರೆ ಎಂಬ ನಿರ್ಧಾರದೊಂದಿಗೆ. ಸದಾ ಹಾಡುತ್ತಲೇ ಇರುತ್ತಿದ್ದ  ಮೊಬೈಲ್ ಈಗ ಜೀವ ಕಳೆದುಕೊಂಡಂತೆ ಪಕ್ಕದಲ್ಲಿ ಬಿದ್ದಿತ್ತು. ನಿದ್ದೆ ಮಾತ್ರೆಯ ಮೊರೆ ಹೋಗುವ ಅಲೋಚನೆ ಸರಿ ಎನಿಸಿತು.


Monday, July 12, 2021

ಎಲ್ಲ ಗರ್ಭಕ್ಕೂ ಬಸಿರಿಲ್ಲಾ ಎಲ್ಲ ಭಾವಕ್ಕೂ ಹೆಸರಿಲ್ಲ

 ಎಲ್ಲ ಗರ್ಭಕ್ಕೂ ಬಸಿರಿಲ್ಲಾ ಎಲ್ಲ ಭಾವಕ್ಕೂ ಹೆಸರಿಲ್ಲ

ನಾ ಹೇಗೆ ಬದುಕಲಿ ಹೇಳು ಗೆಳತೀ
ನೀನಿಲ್ಲದೇ ನನ್ನ ಉಸಿರಿಲ್ಲ
ಹಲವು ನೋವುಗಳ ನುಂಗಲುಬಹುದು
ಈ ವಿರಹ ವೇದನೆಯಲ್ಲಿ ಉಳಿವಿಲ್ಲ
ನೂರು ತಡೆಗಳು ಬಂದರು ಸರಿಯೇ
ಈ ಪ್ರೀತಿಯ ಸೆಳೆತಕ್ಕೆ ಅಳಿವಿಲ್ಲ
ಭಾವನೆ ನನ್ನಲ್ಲಿ ತುಳುಕುವ ಈ ಕ್ಷಣ
ಹೇಳಲು ಯಾಕೋ ಮಾತಿಲ್ಲ
ಮನಸ್ಸಿನ ಮಾತನು ತಿಳಿಸಲು ಸಖಿಯೆ

ವಿತೆಗಳಿನ್ನು ಬೇಕಿಲ್ಲ

ಎಲ್ಲ ಗರ್ಭಕ್ಕೂ ಬಸಿರಿಲ್ಲಾ ಎಲ್ಲ ಭಾವಕ್ಕೂ ಹೆಸರಿಲ್ಲ

ರಚ್ಚೆ

ಮಗು ಮನಸ್ಸು ಚಂಡಿ ಹಿಡಿವುದೊಮ್ಮೊಮ್ಮೆ

ನೀ ಬೇಕೆಂದು, ನಿನ್ನಿರುವು ಬೇಕೆಂದು

ಬೊಗಸೆಯಲ್ಲಿಟ್ಟು ಮುಖವೊಮ್ಮೆ

ಅಳದಲ್ಲೆಲ್ಲೋ ಹುದುಗಿ ಕುಳಿತ

ನೋವನ್ನೊಮ್ಮೆ ಸವರಿ, ಹೊರಗೆಳೆದು

ಧುಮುಕಲು ಅನುವಾಗಿ ನಿಂತ

ಕಣ್ಣೆವೆಯಲ್ಲಿಯ ಹನಿಬಿಂದು ತೊಡೆದು

ಅಪ್ಪುಗೆಯ ಸಾಂತ್ವನ ನೀಡಲ್ಲೊಲ್ಲೆ ಏಕೆ !?

ಮಗು ಮನಸ್ಸು ಚಂಡಿ ಹಿಡಿವುದೊಮ್ಮೊಮ್ಮೆ

ಪುಸಲಾಯಿಸಿ ಮುದ್ದಿಸಲ್ಲೋಲ್ಲೆ ಏಕೆ !?

ಮನಸಿನಾಳದಿಂದ.. ನಿನ್ನವನು

ಒಂದಾದ ಮನಸುಗಳು ಮುರಿಯುವುದೇ ಹೀಗೇ ?

ಸುರಿಯುವ ಮೋಡಗಳು ಕರಗುವ ಹಾಗೆ

ಕೆಲವೊಮ್ಮೆ ಗುಡುಗಿನಿಂದ, ಕೆಲವೊಮ್ಮೆ ನೋವಿನಿಂದ


ಸದ್ದಿಲ್ಲ ಮನಸು ಮುರಿದಾಗ ಒಳಗೊಳಗೇ ಯಾತನೆ

ಕೆಟ್ಟ ಕನಸಿದು ಮುಗಿಯಬಾರದೆ ಎಂದು

ಮನಸಿನೊಳಗೆ ಪ್ರಾರ್ಥನೆ

ಕೆಲವೊಮ್ಮೆ ಸಿಟ್ಟಿನಿಂದ, ಕೆಲವೊಮ್ಮೆ ನೋವಿನಿಂದ


ನಿಜವೊಂದು ಮನಸಲ್ಲೇ ಅಡಗಿ ಕುಳಿತಿದೆ ಗೊತ್ತು

ನನಗಾಗಿ ಯಾರಿಲ್ಲ ಗೆಳತಿ ನಿನ್ನನ್ನು ಹೊರತು

ಕೆಲವೊಮ್ಮೆ ಕನಸಲ್ಲಿ, ಕೆಲವೊಮ್ಮೆ ನನಸಲ್ಲಿ


ನನ್ನ ಹಂಗು ನಿನಗಿಲ್ಲ ನಾ ಬಲ್ಲೆ

ಆದರೆ ನಿನ್ನ ಬಿಟ್ಟು ನಾನಿಲ್ಲ ನಲ್ಲೆ

ಕೇಳುವೆನು ಕ್ಷಮಿಸು

ಕೆಲವೊಮ್ಮೆ ಅಧಿಕಾರದಿಂದ, ಕೆಲವೊಮ್ಮೆ ಸಂಕೋಚದಿಂದ

Tuesday, April 20, 2021

ಅಮ್ಮಾ...

 ಅದೇನೋ ಗೊತ್ತಿಲ್ಲ, ಜ್ವರ ಬಂದಾಗೆಲ್ಲ ಬೇಕಾಗೋದು ಅಮ್ಮ, ಯಾವ ಡಾಕ್ಟರ್ ಅಲ್ಲ ಘಳಿಗೆಗೊಮ್ಮೆ ಬಂದು ಹಣೆ, ಕತ್ತು ಮುಟ್ಟಿ ನೋಡೋದು, "ರವೆ ಗಂಜಿ ಮಾಡಿಕೊಡ್ಲೇನೆ, ಸ್ವಲ್ಪ ಎಳನೀರು ಕುಡಿ, ಶಕ್ತಿ ಬರತ್ತೆ, ತಿಳಿ ಸಾರು ಮಾಡ್ತೀನಿ, ಬಿಸಿ ಬಿಸಿಯಾಗಿ ಊಟಾ ಮಾಡಿ ಮಲಗು" ಅನ್ನೋದು, ನಿದ್ದೆ ಮಾಡಿದ್ರೆ ರೂಮ್ ಬಾಗಿಲು ಮುಂದೆ ಮಾಡಿ, ಎಚ್ಚರ ಆಗದೆ ಇರಲಿ ಅಂತ ಮೊಬೈಲ್ ನಲ್ಲಿ ಸೀರಿಯಲ್ ನೋಡ್ತಾ ಕೂರೋದು, ಇದೆಲ್ಲ ಅಮ್ಮ ಮಾತ್ರ ಮಾಡೋಕೆ ಸಾಧ್ಯ. 

ಅದೇನೋ ಗೊತ್ತಿಲ್ಲ, ಅಮ್ಮ ಹೋದ ಎರಡು ವರ್ಷ ನಂಗೆ ಜ್ವರನೇ ಬಂದಿಲ್ಲ, ಈ ಸಾರಿ ಬಂದಾಗ ಅಮ್ಮ ಬೇಕೇ ಬೇಕು ಅನ್ನೋಷ್ಟು ರಗಳೆ ಆಗ್ತಿತ್ತು. ಅವತ್ತಿಗೆ ಅಮ್ಮ ಹೋಗಿ ಎರಡು ವರ್ಷಗಳು ಕಳೆದಿತ್ತು ಸರಿಯಾಗಿ..

ನೀ ಇರಬೇಕಿತ್ತು ಅಮ್ಮ..

ನನ್ನ ಮಗಳು ಅಮೆರಿಕಾಗೆ ಹೋದ್ಲು ಅಂತ ಎಲ್ಲರ ಹತ್ರ ಹೇಳಿಕೊಳ್ಳೋಕೆ..

ಎಷ್ಟು ಕೆಲಸ ಮಾಡ್ತಿ, ರಾತ್ರಿ ಬೇಗ ಮಲ್ಕೋ ಅಂತ ನಯವಾಗಿ ಗದರೋಕೆ..

ಅಷ್ಟು ದೊಡ್ಡ ಬೈಕ್ ಓಡಿಸ್ತಿ, ಹುಷಾರು ಕಣೋ ಅಂತ ಮೊಮ್ಮಗನ್ನ ಹೆದರಿಸೋಕೆ..

ಮೊಮ್ಮಗಳು ನನ್ನೇ ಜಾಸ್ತಿ ಇಷ್ಟ ಪಡೋದು, ಅವಳಿಗೆ ಅಜ್ಜಿ ಇದ್ದು ಬಿಟ್ರೆ ಸಾಕು ಅಂತ ಹೆಮ್ಮೆ ಪಡೋಕೆ..

ನನ್ನ ಮಗಳಿಗೆ ತವರು ಮನೆಗಿಂತ ಗಂಡನ ಮನೆನೇ ಹತ್ತಿರ ಅಂತ ಪ್ರೀತಿಯಿಂದ ಚಾಡಿ ಹೇಳೋಕೆ..

ಈ ಸಾರಿ ಬಂದಾಗ ಒಂದಿಷ್ಟು ಹುಳಿಪುಡಿ, ಸಾರಿನ ಪುಡಿ ಮಾಡಿ ಇಡ್ತಿನಿ ಬಿಡು ಅನ್ನೋಕೆ..

ಅಮ್ಮಂಗೆ ಪಾಪ ವಯಸ್ಸಾಯಿತು, ನಮ್ಮ ಹೊಸ ಮನೆಗೆ ಕರಕೊಂಡು ಹೋಗಿ ಒಂದಿಷ್ಟು ದಿನ ನೊಡ್ಕೊಬೇಕು ಅಂತ ಹೇಳೋಕೆ...

ಅಮ್ಮ.. ನೀ ಇರಬೇಕಿತ್ತು, ನೂರ್ಕಾಲ. ಎರಡು ವರ್ಷಗಳು ಕಳೆದೇ ಹೋಯ್ತು ನಿನ್ನ ನೋಡದೆ, ಆದರೆ ನಿನ್ನ ಕನವರಿಕೆ ನಿಂತಿಲ್ಲ !