ನೀ ಸೂರ್ಯ
ಸೂರ್ಯಕಾಂತಿ ನಾನು
ನಿನ್ನ ಸುತ್ತ ಪರಿಭ್ರಮಿಸಿ
ತನ್ನದೇ ಪಥ ಅಕ್ಷಗಳನ್ನು
ಸೃಜಿಸಿಕೊಂಡ ಪ್ರುಥೆ - ನನ್ನ ಪ್ರೀತಿ
ನೀ ಚಂದ್ರ
ಕೊಳದ ನೈದಿಲೆ ನಾನು
ಎಲೆಯ ಮೇಲಣ ನೀರ ಹನಿಯನ್ನು
ಮುತ್ತಿನಂತೆ ಸಿಂಗರಿಸುವ
ಪ್ರತಿಫಲಿಸುವ ಸಂಭ್ರಮ - ನನ್ನ ಪ್ರೀತಿ
ನೀ ಕಡಲ ತಡಿ
ನಿನ್ನ ತಾಕುವ ಬೆಲ್ನೊರೆ ಅಲೆ ನಾನು
ಬೊಬ್ಬಿರಿದು ಅಬ್ಬರಿಸಿ ಉಬ್ಬಿ
ಕೆನೆದು ತೊನೆದು, ಬಂದು ಸಿಡಿದು
ನಿನ್ನ ಭೇಟಿಯಲ್ಲಿ ಶಾಂತ - ನನ್ನ ಪ್ರೀತಿ
ನೀ ತಾಯಿ
ಬೊಚ್ಚು ಬಾಯ ಮಗು ನಾನು
ಅತ್ತು ಕರೆದು ರಚ್ಚೆ ಹಿಡಿದು
ಚಂಡಿ ಮಾಡಿ; ಅಂಡಾಗುಂಡಿ
ನಿನ್ನಪ್ಪುಗೆಯ ಹಪಹಪಿ - ನನ್ನ ಪ್ರೀತಿ
ನೀ ಕವಿ
ನಿನ್ನ ಕವಿತೆ ನಾನು
ಬರೆದು ಹರಿದು ಮತ್ತೆ
ಮತ್ತೆ ತೇಪೆ ಹಚ್ಛಿ ಹೊಲಿದ
ರೂಪಕಗಳ ನಡುವೆ ಮರೆತ - ನನ್ನ ಪ್ರೀತಿ
ನೀ ಪ್ರಾಪ್ತಿ
ಪ್ರತೀಕ್ಷೆಯ ಹಣತೆ ನಾನು
ನಿನಗೆಂದೇ ತೊಳಲಾಡಿ, ಒಳಗೇ ಮಿಡುಕಾಡಿ
ಭ್ರೂಣವಾಗಿ, ಮಗುವಾಗಿ, ಮುಗ್ಧವಾಗಿ, ಸ್ಣಿಗ್ಧವಾಗಿ
ಕೊನೆಗೆ ನಿನ್ನಿಂದಲೇ ದಗ್ಧ - ನನ್ನ ಪ್ರೀತಿ
1 comment:
ಚೆನ್ನಾಗಿದೆ ಮೀರಾ...! ಭಾವನೆಗಳ ಸಂತೆಯಲ್ಲಿ ಸಿಕ್ಕಿದ್ದ ಹೆಕ್ಕಿ ಆಗಸದಲ್ಲಿ ಚುಕ್ಕಿಯಾಗಿಸುವ ಕಾಯಕ ಕವಿಗೆ ಮಾತ್ರಾ ಸಾಧ್ಯ. ನಿನ್ನ ಬರೆವ ಶಕ್ತಿ ಇಮ್ಮಡಿಸಲಿ. ನಿನ್ನ ಸೃಷ್ಟಿಯಲ್ಲೆಲ್ಲಾ ಕನ್ನಡ ವಿಜೃಂಭಿಸಲಿ.. ನಿನಗೆ ಒಳ್ಳೆಯದಾಗಲಿ..
Post a Comment