Tuesday, April 20, 2021

ಅಮ್ಮಾ...

 ಅದೇನೋ ಗೊತ್ತಿಲ್ಲ, ಜ್ವರ ಬಂದಾಗೆಲ್ಲ ಬೇಕಾಗೋದು ಅಮ್ಮ, ಯಾವ ಡಾಕ್ಟರ್ ಅಲ್ಲ ಘಳಿಗೆಗೊಮ್ಮೆ ಬಂದು ಹಣೆ, ಕತ್ತು ಮುಟ್ಟಿ ನೋಡೋದು, "ರವೆ ಗಂಜಿ ಮಾಡಿಕೊಡ್ಲೇನೆ, ಸ್ವಲ್ಪ ಎಳನೀರು ಕುಡಿ, ಶಕ್ತಿ ಬರತ್ತೆ, ತಿಳಿ ಸಾರು ಮಾಡ್ತೀನಿ, ಬಿಸಿ ಬಿಸಿಯಾಗಿ ಊಟಾ ಮಾಡಿ ಮಲಗು" ಅನ್ನೋದು, ನಿದ್ದೆ ಮಾಡಿದ್ರೆ ರೂಮ್ ಬಾಗಿಲು ಮುಂದೆ ಮಾಡಿ, ಎಚ್ಚರ ಆಗದೆ ಇರಲಿ ಅಂತ ಮೊಬೈಲ್ ನಲ್ಲಿ ಸೀರಿಯಲ್ ನೋಡ್ತಾ ಕೂರೋದು, ಇದೆಲ್ಲ ಅಮ್ಮ ಮಾತ್ರ ಮಾಡೋಕೆ ಸಾಧ್ಯ. 

ಅದೇನೋ ಗೊತ್ತಿಲ್ಲ, ಅಮ್ಮ ಹೋದ ಎರಡು ವರ್ಷ ನಂಗೆ ಜ್ವರನೇ ಬಂದಿಲ್ಲ, ಈ ಸಾರಿ ಬಂದಾಗ ಅಮ್ಮ ಬೇಕೇ ಬೇಕು ಅನ್ನೋಷ್ಟು ರಗಳೆ ಆಗ್ತಿತ್ತು. ಅವತ್ತಿಗೆ ಅಮ್ಮ ಹೋಗಿ ಎರಡು ವರ್ಷಗಳು ಕಳೆದಿತ್ತು ಸರಿಯಾಗಿ..

ನೀ ಇರಬೇಕಿತ್ತು ಅಮ್ಮ..

ನನ್ನ ಮಗಳು ಅಮೆರಿಕಾಗೆ ಹೋದ್ಲು ಅಂತ ಎಲ್ಲರ ಹತ್ರ ಹೇಳಿಕೊಳ್ಳೋಕೆ..

ಎಷ್ಟು ಕೆಲಸ ಮಾಡ್ತಿ, ರಾತ್ರಿ ಬೇಗ ಮಲ್ಕೋ ಅಂತ ನಯವಾಗಿ ಗದರೋಕೆ..

ಅಷ್ಟು ದೊಡ್ಡ ಬೈಕ್ ಓಡಿಸ್ತಿ, ಹುಷಾರು ಕಣೋ ಅಂತ ಮೊಮ್ಮಗನ್ನ ಹೆದರಿಸೋಕೆ..

ಮೊಮ್ಮಗಳು ನನ್ನೇ ಜಾಸ್ತಿ ಇಷ್ಟ ಪಡೋದು, ಅವಳಿಗೆ ಅಜ್ಜಿ ಇದ್ದು ಬಿಟ್ರೆ ಸಾಕು ಅಂತ ಹೆಮ್ಮೆ ಪಡೋಕೆ..

ನನ್ನ ಮಗಳಿಗೆ ತವರು ಮನೆಗಿಂತ ಗಂಡನ ಮನೆನೇ ಹತ್ತಿರ ಅಂತ ಪ್ರೀತಿಯಿಂದ ಚಾಡಿ ಹೇಳೋಕೆ..

ಈ ಸಾರಿ ಬಂದಾಗ ಒಂದಿಷ್ಟು ಹುಳಿಪುಡಿ, ಸಾರಿನ ಪುಡಿ ಮಾಡಿ ಇಡ್ತಿನಿ ಬಿಡು ಅನ್ನೋಕೆ..

ಅಮ್ಮಂಗೆ ಪಾಪ ವಯಸ್ಸಾಯಿತು, ನಮ್ಮ ಹೊಸ ಮನೆಗೆ ಕರಕೊಂಡು ಹೋಗಿ ಒಂದಿಷ್ಟು ದಿನ ನೊಡ್ಕೊಬೇಕು ಅಂತ ಹೇಳೋಕೆ...

ಅಮ್ಮ.. ನೀ ಇರಬೇಕಿತ್ತು, ನೂರ್ಕಾಲ. ಎರಡು ವರ್ಷಗಳು ಕಳೆದೇ ಹೋಯ್ತು ನಿನ್ನ ನೋಡದೆ, ಆದರೆ ನಿನ್ನ ಕನವರಿಕೆ ನಿಂತಿಲ್ಲ !

Monday, April 19, 2021

ನಿನ್ನ ನೆನಪು

 ಮನದ ದುಗುಡವ

ಮರೆಮಾಸಲೆಂದೆ ಈ ನಸುನಗೆ

ಬಿಚ್ಚಿಡಲು ಸಾಧ್ಯವೇ ಇದನೆಲ್ಲ 

ಬಟಾ ಬಯಲಿನಲಿ ನಿಂತಂತೆ ಭಾಸ

ಬೆರಳುಗಳ ಬೆಸೆದು 

ಕೊಟ್ಟಂದೆ ಭರವಸೆಯ ಬೆಳಕು

ನೀನಿರಲು ನನಗೇನು ಬೇಕು

ನೀರ ಮೇಲಿನ ಗುಳ್ಳೆ

ಬರಲೆಂದೆ ಆಸೆ ದೂರ ತೀರಕೆ

ನೋವು ನಲಿವುಗಳ ಸಮ್ಮಿಲನ

ಈ ಬದುಕು

ಅದರ ಮೇಲೊಂದು ನವಿಲುಗರಿ

ನಿನ್ನ ನೆನಪು


ಕನಸು ಕಾಣುವ ಮೊದಲೇ..

 

17-Apr

ಕನಸು ಕಾಣುವ ಮೊದಲೇ

ನಿಂತಿದ್ದೆ ನೀ ಎದುರಲೇ

ಜೀವದ ಜೀವ ನೀನು

ಉಸಿರಿನ ಉಸಿರು ನೀನು

ನೀನಾದೆ ದಾರಿದೀಪ

ವಾತ್ಸಲ್ಯದ ಮೂರ್ತರೂಪ

ಬಾಳಿಗೆ ಬೆಳಕಾಗಿ ನೀ ಬಂದೆ

ಹಣೆಯ ಸಿಂಧೂರ ನೀ ತಂದೆ

ಕಣ್ತುಂಬಿ ನಿನ್ನ ರೂಪು

ನನ್ನೊಲವೇ ನಿನಗೆ ಮುಡಿಪು

ನಿನಗಾಗಿ ತರುವೆ ಎಲ್ಲ ಸುಖ

ನೀನಾದೆ ನನ್ನ ಪ್ರಾಣ ಸಖ

ನನ್ನೆದೆಯ ಗರ್ಭಗುಡಿಯಲಿ

ನೆಲೆಸಿರುವೆ ನೀ ಚಂದದಲಿ

ನಾನೆಂದೂ ನಿನ್ನವಳು

ನೀನೆಂದೂ ನನ್ನವನು

ಚಿತೆಯಿರಲಿ ಚಿಂತೆಯಿರಲಿ

ನಾನಿರುವೆ ಜೊತೆಯಲಿ

ಹೀಗೇ ಸಾಗಲಿ ಬಾಳ ನೌಕೆ

ಸೇರಲಿ ಶರಧಿಯ ದೂರ ತೀರಕೆ

Sunday, April 18, 2021

ನಿನ್ನೊಳಗಿನ ನಾನು

 ನೀ ಸರಿಸಿದ ಮುಂಗುರಳ ಮೇಲಾಣೆ

ನಿನ್ನ ಕಣ್ಣಲಿ ಕರಗುವ ಬಯಕೆ

ಇಂದೇಕೆ ಈ ಪರಿ ಒಲವು ನಾಕಾಣೆ

ಕಾದಿದೆ ಜೀವ ನಿನ್ನ ಸನಿಹಕೆ


ಮುಟ್ಟಿ ನೋಡೊಮ್ಮೆ ನೇವರಿಸಿ

ಪುಳಕಗೊಂಡಿತೇನೋ ಅಧರ

ಬರಸೆಳೆದು ಇಡಿಯಾಗಿ ಆವರಿಸಿ

ತನು ಬೇಡಿದೆ; ಮಿಲನಕ್ಕೆ ಆತುರ


ತಂತಿಯೊಂದು ಮಿಡಿದಂತೆ ಮೈಯಲ್ಲಿ

ವೀಣೆ ನಾದದ ಓಂಕಾರ

ವೈಣಿಕ ನೀನೀರಲು ಬಳಿಯಲ್ಲಿ

ಪ್ರತಿ ಉಸಿರಲ್ಲೊಂದು ಸುಸ್ವರ


ಅಪ್ಪಿ ಮುದ್ದಾಡಿದೊಂದು ರಸಘಳಿಗೆ

ಒಡಲಲ್ಲಿ ಹೊಸದೇನೋ ಮಿಡಿತ

ಮತ್ತೇನೋ ಅನುಭವದ ಬಯಕೆಗೆ

ಬಿಗಿಯಾದ ಬಂಧನದಲ್ಲಿ ತುಡಿತ


ಒಳಗಿಳಿದು ಹರಡಿದ ಹಿತಯಾತನೆ

ಮತ್ತೇರಿಸಿದೆ ಉತ್ತುಂಗದೆಡೆಗೆ

ನನ್ನದೆಲ್ಲವ ನಿನಗರ್ಪಿಸಿ ನಾನೇ

ಪರಿವೆ ಇಲ್ಲದೆ ನೂಕುವೆ ಝಾವದೆಡೆಗೆ


ಬಿಸಿಯ ಝಳಕ್ಕೆ ನೀರಾದಂತೆ

ಹಣೆಯ ಮೇಲೆಲ್ಲಾ ಬೆವರ ಹನಿಸಾಲು

ಕಾದು ಬೆಂಡಾದ ಇಳೆ ತಂಪಾದಂತೆ

ಮೋಡ ಕರಗಿದ ತಿಳಿ ಮುಗಿಲು