Thursday, July 22, 2021

ಶಿಕ್ಷೆ

 22/7/21

ತಪ್ಪಲ್ಲದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ನಿದ್ದೆ ಇಲ್ಲದೆ ನರಳಿದ್ದ ಮನಸ್ಸು ಕೂಗಿ ಹೇಳುತ್ತಿತ್ತು ಮರು ಕ್ಷಣದಲ್ಲೇ ಕೈ ಸೇರಿತ್ತು ಹಳೆಯದಾಗಿ ಹಿಂದೆ ಸರಿದಿದ್ದ ಸೌಟು. ಗ್ಯಾಸ್ ಸ್ಟೌವ್ ಹಚ್ಚಿ ಉರಿಯುತ್ತಿದ್ದ ಬೆಂಕಿಯನ್ನೊಮ್ಮೆ ಶೂನ್ಯ ವಾಗಿ ದಿಟ್ಟಿಸುತ್ತಾ ನಿಂತಳು. ಕೈ ಯಾಂತ್ರಿಕವಾಗಿ ಸೌಟನ್ನು ಬೆಂಕಿಯ ಮುಂದ್ದೊಡ್ಡಿತು. ಕಾದು ಕೆಂಪಾದ ಸೌಟನ್ನು ಹಿಡಿದು ದೇವರ ಮುಂದೆ ಬಂದು ನಿಂತಳು. ಮನಸ್ಸು ಮೂಕವಾಗಿತ್ತು, ಕೇಳಲು ಹೇಳಲು ಏನೂ ಇರಲಿಲ್ಲ. ಬಲಗೈಲಿದ್ದ ಸೌಟು ಎಡಗೈಯ ಮೇಲೆ ಬರೆ ಎಳೆದೇ ಬಿಟ್ಟಿತು. ಚರ್ಮ ಸುಟ್ಟ ಆ ಕ್ಷಣದಲ್ಲಿ ಮನಸ್ಸು ಚೀರಿದ್ದು ಕೃಷ್ಣಾ ಎಂದಷ್ಟೇ. ನಿದ್ದೆಗೆಟ್ಟು ಬಳಲಿದ್ದ ಕಣ್ಣುಗಳಲ್ಲಿ ತಿಳಿ ನೀರಾಡಿದ್ದು ಗಮನಕ್ಕೆ ಬರಲಿಲ್ಲ. ಎಲ್ಲದಕ್ಕೂ ಮೀರಿ ತನ್ನ ಈ ನಿರ್ಧಾರಕ್ಕೆ ಕಾರಣವಾದ ವ್ಯಕ್ತಿಯ ಮಾತುಗಳು ಬಹಳ ಭಾರವೆನಿಸತೊಡಗಿತ್ತು. ಮೊದಲ ಬಾರಿಗೆ ತನ್ನನ್ನ ತಾನೇ ಶಿಕ್ಷಿಸಿಕೊಂಡಿದ್ದಳು, ಯಾರನ್ನೂ ನಿಂದಿಸದೆ. 

ಮೊಣಕೈ ಮೇಲಿನ ಮೃದುವಾದ ಜಾಗ ಈಗ ಕಪ್ಪಗೆ ಸುಟ್ಟು ಬೊಬ್ಬೆ ಏಳತೊಡಗಿತ್ತು. ಮನಸ್ಸು ಗಟ್ಟಿಯಾಗಿತ್ತು, ಮತ್ತೆ ತಪ್ಪು ಮಾಡಲಾರೆ ಎಂಬ ನಿರ್ಧಾರದೊಂದಿಗೆ. ಸದಾ ಹಾಡುತ್ತಲೇ ಇರುತ್ತಿದ್ದ  ಮೊಬೈಲ್ ಈಗ ಜೀವ ಕಳೆದುಕೊಂಡಂತೆ ಪಕ್ಕದಲ್ಲಿ ಬಿದ್ದಿತ್ತು. ನಿದ್ದೆ ಮಾತ್ರೆಯ ಮೊರೆ ಹೋಗುವ ಅಲೋಚನೆ ಸರಿ ಎನಿಸಿತು.


No comments: