Tuesday, April 20, 2021

ಅಮ್ಮಾ...

 ಅದೇನೋ ಗೊತ್ತಿಲ್ಲ, ಜ್ವರ ಬಂದಾಗೆಲ್ಲ ಬೇಕಾಗೋದು ಅಮ್ಮ, ಯಾವ ಡಾಕ್ಟರ್ ಅಲ್ಲ ಘಳಿಗೆಗೊಮ್ಮೆ ಬಂದು ಹಣೆ, ಕತ್ತು ಮುಟ್ಟಿ ನೋಡೋದು, "ರವೆ ಗಂಜಿ ಮಾಡಿಕೊಡ್ಲೇನೆ, ಸ್ವಲ್ಪ ಎಳನೀರು ಕುಡಿ, ಶಕ್ತಿ ಬರತ್ತೆ, ತಿಳಿ ಸಾರು ಮಾಡ್ತೀನಿ, ಬಿಸಿ ಬಿಸಿಯಾಗಿ ಊಟಾ ಮಾಡಿ ಮಲಗು" ಅನ್ನೋದು, ನಿದ್ದೆ ಮಾಡಿದ್ರೆ ರೂಮ್ ಬಾಗಿಲು ಮುಂದೆ ಮಾಡಿ, ಎಚ್ಚರ ಆಗದೆ ಇರಲಿ ಅಂತ ಮೊಬೈಲ್ ನಲ್ಲಿ ಸೀರಿಯಲ್ ನೋಡ್ತಾ ಕೂರೋದು, ಇದೆಲ್ಲ ಅಮ್ಮ ಮಾತ್ರ ಮಾಡೋಕೆ ಸಾಧ್ಯ. 

ಅದೇನೋ ಗೊತ್ತಿಲ್ಲ, ಅಮ್ಮ ಹೋದ ಎರಡು ವರ್ಷ ನಂಗೆ ಜ್ವರನೇ ಬಂದಿಲ್ಲ, ಈ ಸಾರಿ ಬಂದಾಗ ಅಮ್ಮ ಬೇಕೇ ಬೇಕು ಅನ್ನೋಷ್ಟು ರಗಳೆ ಆಗ್ತಿತ್ತು. ಅವತ್ತಿಗೆ ಅಮ್ಮ ಹೋಗಿ ಎರಡು ವರ್ಷಗಳು ಕಳೆದಿತ್ತು ಸರಿಯಾಗಿ..

ನೀ ಇರಬೇಕಿತ್ತು ಅಮ್ಮ..

ನನ್ನ ಮಗಳು ಅಮೆರಿಕಾಗೆ ಹೋದ್ಲು ಅಂತ ಎಲ್ಲರ ಹತ್ರ ಹೇಳಿಕೊಳ್ಳೋಕೆ..

ಎಷ್ಟು ಕೆಲಸ ಮಾಡ್ತಿ, ರಾತ್ರಿ ಬೇಗ ಮಲ್ಕೋ ಅಂತ ನಯವಾಗಿ ಗದರೋಕೆ..

ಅಷ್ಟು ದೊಡ್ಡ ಬೈಕ್ ಓಡಿಸ್ತಿ, ಹುಷಾರು ಕಣೋ ಅಂತ ಮೊಮ್ಮಗನ್ನ ಹೆದರಿಸೋಕೆ..

ಮೊಮ್ಮಗಳು ನನ್ನೇ ಜಾಸ್ತಿ ಇಷ್ಟ ಪಡೋದು, ಅವಳಿಗೆ ಅಜ್ಜಿ ಇದ್ದು ಬಿಟ್ರೆ ಸಾಕು ಅಂತ ಹೆಮ್ಮೆ ಪಡೋಕೆ..

ನನ್ನ ಮಗಳಿಗೆ ತವರು ಮನೆಗಿಂತ ಗಂಡನ ಮನೆನೇ ಹತ್ತಿರ ಅಂತ ಪ್ರೀತಿಯಿಂದ ಚಾಡಿ ಹೇಳೋಕೆ..

ಈ ಸಾರಿ ಬಂದಾಗ ಒಂದಿಷ್ಟು ಹುಳಿಪುಡಿ, ಸಾರಿನ ಪುಡಿ ಮಾಡಿ ಇಡ್ತಿನಿ ಬಿಡು ಅನ್ನೋಕೆ..

ಅಮ್ಮಂಗೆ ಪಾಪ ವಯಸ್ಸಾಯಿತು, ನಮ್ಮ ಹೊಸ ಮನೆಗೆ ಕರಕೊಂಡು ಹೋಗಿ ಒಂದಿಷ್ಟು ದಿನ ನೊಡ್ಕೊಬೇಕು ಅಂತ ಹೇಳೋಕೆ...

ಅಮ್ಮ.. ನೀ ಇರಬೇಕಿತ್ತು, ನೂರ್ಕಾಲ. ಎರಡು ವರ್ಷಗಳು ಕಳೆದೇ ಹೋಯ್ತು ನಿನ್ನ ನೋಡದೆ, ಆದರೆ ನಿನ್ನ ಕನವರಿಕೆ ನಿಂತಿಲ್ಲ !

No comments: