Tuesday, October 9, 2007

ನಿನ್ನ ನಿರೀಕ್ಷೆಯಲ್ಲಿ...

ನೀನಂದು ಬಿಟ್ಟು ಹೋದ ನನ್ನ ಕೈಗಳಲ್ಲಿನ್ನೂ
ನಿನ್ನ ಬಿಸುಪು, ಸ್ಣಿಗ್ಧತೆ, ಮಾರ್ಧವತೆ ಮತ್ತು
ಒಂದಿಸ್ತು ತಂಪು ಇನ್ನೂ ಹಾಗೇ
ಉಳಿದಿದೆ...

ನೀನಂದು ಬಿಟ್ಟು ಹೋದ ಹಾದಿಯಲ್ಲಿನ್ನೂ
ಕೆಂಡ ಸಂಪಿಗೆ ಕಂಪು, ಸೂರ್ಯಾಸ್ತದ ಕೆಂಪು
ಹೂ ಮಾರುವ ಮುದುಕಿಯ ಬೊಚ್ಚು ಬಾಯ
ಇಷ್ತಗಲದ ನಗೆ ಇನ್ನೂ ಹಾಗೇ ಉಳಿದಿದೆ...

ನೀನಂದು ಬಿಟ್ಟು ಹೋದ ಬೀದಿ ತಿರುವಿನ
ಮಿನಾರಿನ ಗುಂಬಜಿನಲ್ಲಿ ನಿನ್ನ ಖಿಲ್ಲನೆ ನಗೆ
ಅಜಾನಿನಂತೆ ರಿಂಗನಿಸುತ್ತಾ
ಇನ್ನೂ ಹಾಗೇ ಉಳಿದಿದೆ...

ನೀನಂದು ಬಿಟ್ಟು ಹೋದ ನಿನ್ನ ನೆನಪುಗಳಿನ್ನೂ
ದೊಡ್ಡ ದನಿಯಲ್ಲಿ ರಣಕೇಕೆ ಹಾಕುತ್ತಾ ನನ್ನೆದೆಯಲ್ಲಿ
ಇಣುಕಿ ನೋಡಬಲ್ಲಸ್ತು ದೊಗರು ಮಾಡುತ್ತಾ
ಇನ್ನೂ ಹಾಗೇ ಉಳಿದಿದೆ...

ನಾನಲ್ಲೇ ಉಳಿದಿದ್ದೇನೆ; ಸಂತೆಯಲ್ಲಿ ಅಮ್ಮನ
ಕೈ ಬೆರಳು ತಪ್ಪಿದ ಕಂಗಾಲು ಮಗುವಿನಂತೆ
ಕಣ್ಣಿಗಡರಿದ ಧೂಳು ಒರೆಸಲೂ ಮರೆತಂತೆ
ಹಸಿದ ಬೆವಾರಿಸು ಜೀವ ಹಿಡಿ ಅನ್ನಕ್ಕೆ ಕಾದಂತೆ
ಮತ್ತು ಇನ್ನೂ ಹಾಗೇ.....

Monday, October 8, 2007

ನನ್ನ ಪ್ರೀತಿ

ನೀ ಸೂರ್ಯ
ಸೂರ್ಯಕಾಂತಿ ನಾನು
ನಿನ್ನ ಸುತ್ತ ಪರಿಭ್ರಮಿಸಿ
ತನ್ನದೇ ಪಥ ಅಕ್ಷಗಳನ್ನು
ಸೃಜಿಸಿಕೊಂಡ ಪ್ರುಥೆ - ನನ್ನ ಪ್ರೀತಿ

ನೀ ಚಂದ್ರ
ಕೊಳದ ನೈದಿಲೆ ನಾನು
ಎಲೆಯ ಮೇಲಣ ನೀರ ಹನಿಯನ್ನು
ಮುತ್ತಿನಂತೆ ಸಿಂಗರಿಸುವ
ಪ್ರತಿಫಲಿಸುವ ಸಂಭ್ರಮ - ನನ್ನ ಪ್ರೀತಿ

ನೀ ಕಡಲ ತಡಿ
ನಿನ್ನ ತಾಕುವ ಬೆಲ್ನೊರೆ ಅಲೆ ನಾನು
ಬೊಬ್ಬಿರಿದು ಅಬ್ಬರಿಸಿ ಉಬ್ಬಿ
ಕೆನೆದು ತೊನೆದು, ಬಂದು ಸಿಡಿದು
ನಿನ್ನ ಭೇಟಿಯಲ್ಲಿ ಶಾಂತ - ನನ್ನ ಪ್ರೀತಿ

ನೀ ತಾಯಿ
ಬೊಚ್ಚು ಬಾಯ ಮಗು ನಾನು
ಅತ್ತು ಕರೆದು ರಚ್ಚೆ ಹಿಡಿದು
ಚಂಡಿ ಮಾಡಿ; ಅಂಡಾಗುಂಡಿ
ನಿನ್ನಪ್ಪುಗೆಯ ಹಪಹಪಿ - ನನ್ನ ಪ್ರೀತಿ

ನೀ ಕವಿ
ನಿನ್ನ ಕವಿತೆ ನಾನು
ಬರೆದು ಹರಿದು ಮತ್ತೆ
ಮತ್ತೆ ತೇಪೆ ಹಚ್ಛಿ ಹೊಲಿದ
ರೂಪಕಗಳ ನಡುವೆ ಮರೆತ - ನನ್ನ ಪ್ರೀತಿ

ನೀ ಪ್ರಾಪ್ತಿ
ಪ್ರತೀಕ್ಷೆಯ ಹಣತೆ ನಾನು
ನಿನಗೆಂದೇ ತೊಳಲಾಡಿ, ಒಳಗೇ ಮಿಡುಕಾಡಿ
ಭ್ರೂಣವಾಗಿ, ಮಗುವಾಗಿ, ಮುಗ್ಧವಾಗಿ, ಸ್ಣಿಗ್ಧವಾಗಿ
ಕೊನೆಗೆ ನಿನ್ನಿಂದಲೇ ದಗ್ಧ - ನನ್ನ ಪ್ರೀತಿ